" ಶ್ರೀ ಶಂಕರರ ಪರಕಾಯ ಪ್ರವೇಶ"
ಒಂದು ಸಲ ಶ್ರೀ ಶಂಕರಾ ಚಾರ್ಯರು ಮಂಡಲಾ ಎಂಬ ಊರಿಗೆ ಹೋದರು. ಆ ಊರು ಮಂಡನ ಮಿಶ್ರರ ಗ್ರಾಮ. ಮಂಡನ ಮಿಶ್ರರ ಹೆಸರಿನಿಂದಲೇ ಆ ಗ್ರಾಮಕ್ಕೆ ಮಂಡಲಾ ಎಂಬ ಹೆಸರು ಬಂದಿತ್ತು.
ಶಂಕರಾಚಾರ್ಯರು ಊರನ್ನು ಪ್ರವೇಶಿಸಿದೊಡನೆಯೇ, ಊರ ಹೊರಗಿನ ಬಾವಿಯಿಂದ ನೀರು ಸೇದುತ್ತಿದ್ದ ಹೆಂಗಸರೊಡನೆ" ಇಲ್ಲಿ ಮಂಡನ ಮಿಶ್ರರ ಮನೆಯೆಲ್ಲಿದೆ?" ಎಂದು ಕೇಳಿದರು.
ಆಗ ನೀರು ಸೇದುತ್ತಿದ್ದ ಹೆಂಗಸರು ನಗತೊಡಗಿದರು. ಮಂಡನ ಮಿಶ್ರರ ಮನೆಯನ್ನು ಕೇಳುವುದೇತಕ್ಕೆ? ಊರಿನ ಪ್ರತಿಯೊಬ್ಬರಿಗೂ, ಅವರ ಮನೆ ಪರಿಚಿತವೇ, ಅಷ್ಟೇ ಏಕೆ, ಅವರ ಮನೆಯಿಂದ ಹಾದು ಬರುವ ಗಾಳಿಯು ಕೂಡ ಅವರ ಮನೆಯನ್ನು ತೋರಿಸುವುದು, ಅವರ ಮನೆಯ ಮುಂದೆ ಪಂಜರದಲ್ಲಿರುವ ಗಿಳಿಗಳು ಕೂಡ ಉಪನಿಷತ್ತಿನ ವಾಕ್ಯಗಳನ್ನು ಹೇಳುತ್ತಿರುತ್ತವೆ, ಅವರ ಮನೆಯನ್ನು ನೀವು ಕೇಳಬೇಕಾದುದ್ದೇ ಇಲ್ಲ, ನೀವು ಸುಮ್ಮನೆ ಹೋಗಿ, ನಿಮ್ಮನ್ನು ಅವರ ಮನೆ ತಾನಾಗೇ ಕರೆಯುವುದು, ನೀವು ಯಾರನ್ನು ಕೂಡಾ ಕೇಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಶಂಕರರು ಮಂಡನ ಮಿಶ್ರರ ಮನೆಯ ಬಾಗಿಲಿಗೆ ಹೋದರು. ಆ ಹೆಂಗಸರು ಹೇಳಿದ ಮಾತು ಸತ್ಯವಾಗಿತ್ತು. ಪಂಜರದಲ್ಲಿದ್ದ ಗಿಳಿಗಳು ವೇದೋಪನ್ನಿಷತ್ತನ್ನು ಉಲಿಯುತ್ತಿದ್ದವು. ಶಂಕರರು ಒಳಗೆ ಹೋಗಿ, ಅವರಿಗೆ ಕೈ ಮುಗಿದು, ತಾವು ಬಂದ ಕಾರಣವನ್ನು ಅವರಿಗೆ ತಿಳಿಸಿ, ಅವರನ್ನು ತಮ್ಮೊಂದಿಗೆ ವಾದಕ್ಕೆ ಇಳಿಯಲು ಆಹ್ವಾನಿಸಿದರು.
ಮಂಡನಮಿಶ್ರರು, ಶಂಕರಾಚಾರ್ಯರಿಗಿಂತ ವಯಸ್ಸಿನಲ್ಲಿ ಹಿರಿಯರು, ಬಹಳ ಖ್ಯಾತರಾದವರು. ಸುತ್ತಮುತ್ತಲೂ ಅವರ ಹೆಸರು ಬಹಳ ಪ್ರಸಿದ್ಧವಾಗಿತ್ತು. ಶಂಕರಾಚಾರ್ಯರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಅವರಿಗೆ ಶಿಷ್ಯರೂ ಕೂಡಾ ಇದ್ದರು. ಶಂಕರರು ಅವರೊಂದಿಗೆ ಸತ್ಯಾನ್ವೇಷಣೆಗಾಗಿ ನಿಮ್ಮೊಂದಿಗೆ ನಾನು ವಾದ ಮಾಡ ಬಯಸುತ್ತೇನೆ, ಎಂದು ಹೇಳಿದರು.
ಮಂಡನ ಮಿಶ್ರರು ಅವರಿಗೆ ಸ್ವಾಗತವನ್ನು, ನೀಡುತ್ತಾ, ಅಯ್ಯಾ, ನೀನಿನ್ನೂ, ಯುವಕ, ನನಗೆ ನೀನು ಸರಿ ಜೋಡಿಯಲ್ಲ, ನನ್ನ ಅನುಭವ ನಿನಗಿಂತ ಹೆಚ್ಚಿನದು, ನೀನಿನ್ನೂ ಸಣ್ಣವನು, ಎಂದರು. ಆಗ ಶಂಕರರಿಗೆ ಮೂವತ್ತು ವರ್ಷ ವಯಸ್ಸು, ಮಂಡನ ಮಿಶ್ರರಿಗೆ ಐವತ್ತಕ್ಕಿಂತ ಹೆಚ್ಚಿನ ವಯಸ್ಸಾಗಿತ್ತು. ಹಾಗಾಗಿ ಅವರು ನಾನು ನಿನ್ನ ತಂದೆಯ ವಯಸ್ಸಿನವನು, ನನಗೆ ನಿನಗಿಂತ ಅನುಭವ ಜಾಸ್ತಿ, ಆದ್ದರಿಂದ ಈ ವಾಗ್ ಯುದ್ಧ ಸರಿಸಮಾನ ಎನ್ನಿಸುವುದಿಲ್ಲ, ಹಾಗಾಗಿ, ನಿನಗೊಂದು ಅನುಕೂಲ ಒದಗಿಸಿಕೊಡುತ್ತೇನೆ, ತೀರ್ಪು, ನೀಡುವವರನ್ನು ನೀನೇ, ನಿನ್ನ ಇಚ್ಛೆಯಂತೆ ಆರಿಸಿಕೊಳ್ಳಬಹುದು. ಸೋಲು ಯಾರಿಗೆ , ಗೆಲುವು ಯಾರಿಗೆ ಎಂದು ಅವರೇ ತೀರ್ಮಾನ ನೀಡುವರು ಎಂದು ಹೇಳಿದರು.
ಇಬ್ಬರೂ ಶತ್ರುಗಳೇನಲ್ಲ, ಇದೊಂದು ಪ್ರೇಮ ಕಲಹವಿದ್ದಂತೆ, ಇದರಲ್ಲಿ ಯಾವ ಹೊಡೆದಾಟ, ಬಡಿದಾಟವೂ ಇರಲ್ಲಿಲ್ಲ. ಒಬ್ಬ ವೃದ್ಧನು, ಒಬ್ಬ ಯುವಕನಿಗೆ ತನ್ನ ಮಗನ ರೀತಿಯಲ್ಲಿ ಸ್ವಾಗತಿಸಿ, ಬೇಕಾದ ಸವಲತ್ತು ಸೌಕರ್ಯಗಳನ್ನು ನೀಡುತ್ತಿರುವಂತಿತ್ತು. ಆದರೆ ಶಂಕರರು, ಮಂಡನ ಮಿಶ್ರರ ಖ್ಯಾತಿಗೆ ತಕ್ಕಂತೆ, ಅವರಿಗೆ ಗೌರವ ನೀಡಿ, ಅವರಿಗೆ ಸರಿಹೋಗುವಂತಹ ತೀರ್ಪುಗಾರರನ್ನೇ ಸಭೆಯಲ್ಲಿ ಹುಡುಕಿದರು. ಮಂಡನ ಮಿಶ್ರರ ಧರ್ಮಪತ್ನಿ, ಭಾರತಿ ದೇವಿಯನ್ನು ಬಿಟ್ಟು ,ಬೇರೆ ಯಾರೂ ಅಷ್ಟು ಸರಿ ಎನಿಸಲಿಲ್ಲ ಅವರಿಗೆ. ಅದಕ್ಕಾಗಿ ಅವರು, ನಿಮ್ಮ ಧರ್ಮಪತ್ನಿಯವರೇ ನಿರ್ಣಾಯಕ ರಾಗಲಿ ಎಂದು ಹೇಳಿದರು.
ಇದಕ್ಕೆ ಭಾರತಿ ದೇವಿಯವರು ಒಪ್ಪಿಕೊಂಡರು. ಶಂಕರರಲ್ಲದೇ, ಬೇರೆ ಯಾರೇ ಆಗಿದ್ದರೂ , ಈ ತೀರ್ಮಾನ ಮಾಡುತ್ತಿರಲಿಲ್ಲ, ಏಕೆಂದರೆ, ಪತ್ನಿಯನ್ನು ನಿರ್ಣಾಯಕಳಾಗಿ ಆರಿಸಿದರೆ ಅವಳು ಬಹುಶಃ ತನ್ನ ಪತಿಯ ಪಕ್ಷವನ್ನೇ ಆರಿಸಬಹುದು ಎಂದುಕೊಳ್ಳುತ್ತಿದ್ದರು. ಆದರೆ ಇದೊಂದು ಸತ್ಯಾನ್ವೇಷಣೆಯ ವಿವಾದವಾಗಿತ್ತು.ವಾದ ವಿವಾದವೂ ನಡೆಯಿತು, ಎಲ್ಲವೂ ಮುಗಿದ ನಂತರ ಪತ್ನಿಯು ಪತಿಯನ್ನು ಸೋತನೆಂದು ನಿರ್ಣಯಿಸಿ, ಶಂಕರರು ಗೆದ್ದರೆಂದು ತುಂಬಿದ ಸಭೆಯಲ್ಲಿ ತೀರ್ಮಾನವಿತ್ತಳು.
ಆದರೆ ಆಕೆ ಇನ್ನೂ ಒಂದು ಮಾತು ಹೇಳಿದಳು, ಈ ಸೋಲು ಇನ್ನೂ ಅಪೂರ್ಣ, ಏಕೆಂದರೆ ನಾನು ಅವರ ಅರ್ಧಾಂಗಿನಿ, ನೀವು ಮಂಡನ ಮಿಶ್ರರನ್ನು , ಅರ್ಧ ಭಾಗ ಮಾತ್ರ ಗೆದ್ದಿರುವಿರಿ, ಈಗ ನೀವು ಅವರ ಅರ್ಧಾಂಗಿನಿಯಾಗಿರುವ ನನ್ನಲ್ಲಿ ಕೂಡಾ ವಾದ ಮಾಡಬೇಕು ಎಂದಳು.ಎಲ್ಲರಿಗೂ ಇದಂತೂ ತುಂಬಾ ತಮಾಷೆ ಎನಿಸಿತು. ಆದರೆ ಅವಳು ಹೇಳಿದ ಮಾತು ಸರಿಯಾಗಿತ್ತು, ಏಕೆಂದರೆ ಪತ್ನಿಯಾದವಳು ಅರ್ಧಾಂಗಿನಿ ಎನಿಸಿಕೊಂಡಿರುವಾಗ, ಅರ್ಧ ಭಾಗ , ಮಾತ್ರ ಮಂಡನ ಮಿಶ್ರರು ಸೋತಂತಾಯಿತು . ಇದನ್ನು ಶಂಕರರು ಅಲ್ಲಗೆಳೆಯಲಾರದೆ ಒಪ್ಪಿಕೊಂಡರು. ಇದು ಅವರಿಗೆ ಕಸಿವಿಸಿಯನ್ನುಂಟು ಮಾಡಿತು.
ಆದರೆ ಅವರ ಪತ್ನಿ, ಮಂಡನಮಿಶ್ರರನ್ನು ಪರಾಜಿತರೆಂದು ಘೋಷಿಸಿ ಬಿಟ್ಟಳು. ಆದರೆ, ಮಂಡನ ಮಿತ್ರರು ಅವಳ ಮಾತಿನ ಪ್ರಕಾರ ಅರ್ಧ ಸೋತಂತಾಗಿತ್ತು, ಅವರ ಅರ್ಧಾಂಗಿನಿ ಯಾದ ತನ್ನನ್ನು ವಾದದಲ್ಲಿ ಸೋಲಿಸಿದರೆ ಮಾತ್ರ, ಅವರು ಪೂರ್ತಿ ಸೋತಂತಾಗುವುದು ಎಂದು ನಿರ್ಣಯಿಸಿದಳು.
ಶಂಕರರೇನೊ ಇದಕ್ಕೆ ಒಪ್ಪಿಕೊಂಡರು. ಆದರೆ, ಭಾರತಿದೇವಿ ಕೇಳಿದ ಕೆಲವು ಪ್ರಶ್ನೆಗಳಿಂದ ಶಂಕರರು ತಬ್ಬಿಬ್ಬಾದರು. ಏಕೆಂದರೆ ಆಕೆ ಬ್ರಹ್ಮ ಜ್ಞಾನದ ಬಗ್ಗೆ ಯಾವ ಪ್ರಶ್ನೆಯನ್ನು ಕೇಳಲಿಲ್ಲ, ಬ್ರಹ್ಮ ಜ್ಞಾನದದಲ್ಲಿ ಮಂಡಲ ಮಿಶ್ರರು ಸೋತುಹೋದುದನ್ನು ಕಣ್ಣಾರೆ ಕಂಡ ಆಕೆಗೆ, ಈತನೊಂದಿಗೆ ಬ್ರಹ್ಮತತ್ವದ ಬಗೆ ವಾದ ಮಾಡಿ ಗೆಲ್ಲಲು ಸಾಧ್ಯವಿಲ್ಲವೆಂದು ಅವಳಿಗೆ ಸ್ಪಷ್ಟವಾಗಿತ್ತು, ಅಲ್ಲದೆ ಮಂಡನ ಮಿಶ್ರರು, ಆ ಬಗ್ಗೆ ತನಗಿಂತ ಹೆಚ್ಚು ತಿಳಿದವರೆಂದೂ ಅವಳಿಗೆ ತಿಳಿದಿತ್ತು. ಅವರೇ ಶಂಕರರೊಂದಿಗೆ ಸೋತಿರುವಾಗ, ತಾನು ಇನ್ನು ಬ್ರಹ್ಮ ತತ್ವದ ಬಗ್ಗೆ ಮಾತನಾಡುವುದು ವ್ಯರ್ಥವೆನಿಸಿತು. ಏಕೆಂದರೆ ಬ್ರಹ್ಮ ತತ್ವದಲ್ಲಿ ಮಂಡನ ಮಿಶ್ರರು ತನಗಿಂತ ಶ್ರೇಷ್ಠರೆಂದು ತಿಳಿದೇ ಅವರನ್ನು ತಾನು ಮದುವೆಯಾದದ್ದು. ಹೀಗಿರುವಾಗ ಈಗ ಪತಿ ,ವಾದದಲ್ಲಿ ಪೂರ್ತಿಯಾಗಿ ಸೋಲುವುದನ್ನೂ ಅವಳು ಸಹಿಸಲಿಲ್ಲ. ಅದಕ್ಕಾಗಿಯೇ ಅವಳು ಕಾಮವಾಸನೆಯ ಬಗ್ಗೆ ಶಂಕರರಿಗೆ ಪ್ರಶ್ನೆಗಳನ್ನು ಕೇಳುತ್ತಾ ವಾದಕ್ಕೆ ಇಳಿದಳು.
ಶಂಕರರು ಯುವಕರು, ಅವಿವಾಹಿತರು. ಅವಳ ಪ್ರಶ್ನೆಯಿಂದ ಪೇಚಿಗೆ ಸಿಲುಕಿದರು. ಈ ಪ್ರಶ್ನೆಗೆ ಉತ್ತರ ನೀಡಲು, ನಾನು ಅವಿವಾಹಿತ ಬ್ರಹ್ಮಚಾರಿ, ಆದುದರಿಂದ ತನಗೆ ಪ್ರೇಮವೂ ತಿಳಿಯದು ಕಾಮವೂ ತಿಳಿಯದು, ಅದರ ಅನುಭವವಿಲ್ಲದ ತಾನು ತಟ್ಟನೆ ಉತ್ತರಿಸಿದರೆ, ಅನುಭವವಿಲ್ಲದ ಜ್ಞಾನ ನಿಸ್ಸಾರವಾದದ್ದು, ಅದಕ್ಕೆ ಬೆಲೆ ಇರುವುದಿಲ್ಲ, ಎಂದು ತಿಳಿದು, ಬ್ರಹ್ಮ ತತ್ವವನ್ನು ಓದಿ, ಆ ವಿಚಾರದಲ್ಲಿ ಮಂಡನಮಿತ್ರರು , ನನ್ನೊಂದಿಗೆ ಚರ್ಚಿಸಿ ಆ ವಿಚಾರದಲ್ಲಿ ಸೋತಂತೆ, ಕಾಮವಾಸನೆಯ ಬಗ್ಗೆಯೂ ನನ್ನೊಳಗಿರುವ ಪುಸ್ತಕ ಜ್ಞಾನವು ತಿರುಳಿಲ್ಲದಂತಾಗುವುದು, ಇದರಿಂದ ನನಗೂ ಸೋಲು ಖಚಿತ ಎಂದು ತಿಳಿದು, ಈ ವಿಷಯದಲ್ಲಿ ನನ್ನದು ಕೇವಲ ಕೇಳಿಕೆಯ ಜ್ಞಾನ, ಅನುಭವದಿಂದ ಬಂದ ಜ್ಞಾನವಲ್ಲ. ಆದರೆ ಭಾರತಿ ದೇವಿಯದು ಅನುಭವದಿಂದ ಬಂದ ಜ್ಞಾನ. ಈಗ ನಾನು ವಾದಕ್ಕೆ ಹೋದರೆ ತನಗೆ ಸೋಲು ಖಚಿತವೆಂದು ತಿಳಿದು, ಶಂಕರಾಚಾರ್ಯರು ಅದರ ಬಗ್ಗೆ ಅನುಭವ ಪಡೆದು ಹಿಂತಿರುಗಿ ಬರುವೆ, ನೀವು ನನಗೆ ಆರು ತಿಂಗಳ ಸಮಯ ನೀಡಿ ಎಂದು ಕೇಳಿದರು.
ಇದು ಸತ್ಯವಾದದ್ದರಿಂದ, ಭಾರತಿದೇವಿ ಇದಕ್ಕೆ ಒಪ್ಪಿಕೊಂಡು, ಒಳ್ಳೆಯದು ನಿನಗೆ ಆರು ತಿಂಗಳ ಸಮಯ ಇದೆ, ಅನುಭವ ಪಡೆದು ನಂತರ ಬರಬಹುದು, ಎಂದು ಹೇಳಿದಳು.
ಶಂಕರಾಚಾರ್ಯರಿಗೆ, ಈಗ ಧರ್ಮ ಸಂಕಟಕ್ಕೆ ಸಿಲುಕಿದಂತಾಯಿತು, ಬಹಳವಾಗಿ ಯೋಚಿಸಿ, ತಮ್ಮ ದೇಹವನ್ನು ತ್ಯಜಿಸಿ, ಮೃತನಾದ ಒಬ್ಬ ರಾಜನ ಶರೀರವನ್ನು ಹೊಕ್ಕು ಅದರ ಮೂಲಕ, ಆರು ತಿಂಗಳ ಕಾಲ, ಭೌತ ಸುಖ, ಕಾಮವಾಸನೆಗಳ ಅನುಭವ ಪಡೆದು, ಹೇಳಿದ ಸಮಯಕ್ಕೆ ಸರಿಯಾಗಿ ಹಿಂತಿರುಗಿ ಬಂದರು.
ಅವರ ಮುಖವನ್ನು ನೋಡಿದೊಡನೆ ಭಾರತಿದೇವಿ, ಇನ್ನು ನಿಮ್ಮೊಡನೆ ವಾದ ವಿವಾದದ ಅವಶ್ಯಕತೆ ಇಲ್ಲ, ನೀವು ತಿಳಿದೇ ಬಂದಿರುವುದು ನಿಮ್ಮ ಮುಖ ನೋಡಿದರೆ ಗೊತ್ತಾಗುತ್ತದೆ, ಇಲ್ಲಿಗೆ ವಿವಾದ ಮುಗಿಯಿತು, ನೀವೇ ಗೆದ್ದಿರುವಿರಿ, ನನ್ನನ್ನು ನಿಮ್ಮ ಶಿಷ್ಯೆಯಾಗಿ ಸ್ವೀಕರಿಸಿ , ಎಂದಳು. ಇಲ್ಲಿ ಇವರಿಬ್ಬರಲ್ಲೂ, ಯಾವ ದ್ವೇಷ ಭಾವವೂ, ಇರಲಿಲ್ಲ. ಪರಸ್ಪರ ಅಪಾರವಾದ ಶ್ರದ್ಧೆ, ಒಬ್ಬರ ಬಗ್ಗೆ ಒಬ್ಬರಲ್ಲಿ ಗೌರವ ಭಾವದಿಂದ ಮಾಡಿದ ವಾದವಿವಾದವಾಗಿತ್ತು.
ಕೊನೆಯಲ್ಲಿ, ಮಂಡನ ಮಿಶ್ರ, ಹಾಗೂ ಅವರ ಪತ್ನಿ ಭಾರತಿ ದೇವಿ , ಶಂಕರರ ಶಿಷ್ಯರಾದರು. ಶಂಕರರು, ಸೋತವರನ್ನು , ಎಬ್ಬಿಸಿ ಅವರಿಗೆ ನವಚೈತನ್ಯವನ್ನು ತುಂಬಿದರು. ಯಾರ ಮನೆಯಲ್ಲಿ ಕತ್ತಲೆ ಇತ್ತೊ ಅಲ್ಲಿ ದೀಪವನ್ನು ಬೆಳಗಿಸಿದರು. ಹಾಗಾಗಿ ಅವರ ಚರಣಗಳಲ್ಲಿ ಬಾಗಿದವರು ಅವರಿಗೆ ಸೋತು ಬಾಗಲಿಲ್ಲ. ಅಲ್ಲಿ ಸೋಲಿನ ಭಾವವಿರಲಿಲ್ಲ, ಧನ್ಯತಾ ಭಾವವಿತ್ತು . ಯಾರು ಸೋತರೊ, ಅವರು, ಅವರ ಶಿಷ್ಯತ್ವವನ್ನು ಅವರಾಗೇ ಕೈಗೊಂಡರು. ಶಂಕರರ ಚರಣಗಳಲ್ಲಿ ಪರಮಾತ್ಮನ ಚರಣಗಳನ್ನು ಕಂಡುಕೊಂಡರು.
"ಕಾಯಕದ ಜೊತೆಗೆ ದೇಶ ಸುತ್ತು"
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಸಮಸ್ಸೆಗಳಿದ್ದರೆ , ನೇರವಾಗಿ ವಿಚಾರಿಸಿ, ಸಲಹೆಗಳು ನೀಡಿ.